ಕೃಷಿ ತಂಡಗಳು 

ಸಾಮಾನ್ಯವಾಗಿ ರೈತ ತನ್ನ ಕುಟುಂಬದ ಸದಸ್ಯರ ಸಹಾಯದಿಂದ ತನ್ನ ಹಿಡುವಳಿಗಳ ಕೆಲಸಗಳನ್ನು ಪೂರೈಸಿಕೊಳ್ಳುತ್ತಾನೆ. ಬೇಸಾಯಕಾರ್ಯಗಳು ಋತುಗಳಿಗನುಸಾರವಾಗಿ ನಡೆಯಬೇಕಾದ ಕ್ರಿಯೆಗಳಾದ್ದರಿಂದ ಎಲ್ಲ ರೈತರೂ ಅವನ್ನು ನಿಶ್ಚಿತ ಅವಧಿಯಲ್ಲೇ ಮಾಡಿ ಮುಗಿಸಬೇಕಾಗುತ್ತದೆ. ಆದ್ದರಿಂದ ಕೆಲವು ವೇಳೆ ತಮ್ಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದಲೇ ಕೂಲಿಯಾಳುಗಳ ಪೂರೈಕೆ ಸಾಧ್ಯವಾಗದಿರಬಹುದು. ಅಂಥ ಸಮಯಗಳಲ್ಲಿ ಕೃಷಿ ತಂಡಗಳು ಸಂಸಾರ ಸಮೇತವಾಗಿ ದೂರದ ಪ್ರದೇಶಗಳಿಂದ ತಾತ್ಕಾಲಿಕವಾಗಿ ವಲಸೆ ಬಂದು ಗ್ರಾಮದಿಂದ ಗ್ರಾಮಕ್ಕೆ ಹೋಗಿ ಬೇಸಾಯದ ಕಾರ್ಯಗಳನ್ನು ಪೂರೈಸಿಕೊಡಲು ಸಹಾಯವಾಗುತ್ತವೆ. ಇಂಥ ತಂಡಗಳು ಸಾಮಾನ್ಯವಾಗಿ ಹೆಚ್ಚು ಜನನಿಬಿಡವಲ್ಲದ ಆದರೆ ಕೆಲವು ವ್ಯವಸಾಯ ಕಾರ್ಯಗಳಿಗೆ ಹೆಚ್ಚು ಕೆಲಸಗಾರರ ಬೇಡಿಕೆ ಇರುವ ಮಲೆನಾಡಿನ ಕಾಫಿತೋಟಗಳಲ್ಲಿ ಕಂಡುಬರುತ್ತವೆ. ಅದರಲ್ಲೂ ಗಿಡಗಳಿಂದ ಕಾಫಿ ಹಣ್ಣುಗಳನ್ನು ಆರಿಸುವಾಗ ಆ ಪ್ರದೇಶದಲ್ಲಿ ಕೂಲಿಗಾರರಿಗೆ ಬೇಡಿಕೆ ಅಗಾಧವಾಗಿ ಹೆಚ್ಚುತ್ತದೆ. ಈ ಕೆಲಸಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಕೇರಳ ರಾಜ್ಯದ ಕಡೆಗಳಿಂದ ವಲಸೆ ಬರುವ ಕೃಷಿ ತಂಡಗಳು ಪೂರೈಸಿಕೊಟ್ಟು ಕಾಫಿ ಬೆಳೆಯ ಅಭಿವೃದ್ಧಿಗೆ ಸಹಾಯಕವಾಗಿದೆ. 		(ಆರ್.ಆರ್.ಎ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ